ನೀರೆತ್ತುವ ಉಪಕರಣಗಳು

	ನೀರಿನ ವಸತಿ ಜಮೀನಿಗಿಂತ ಕೆಳಮಟ್ಟದಲ್ಲಿ ಇದ್ದಾಗ ನೀರನ್ನು ಮೇಲೆತ್ತುವುದಕ್ಕೆ ಯಾವುದಾದರೂ ಒಂದು ಉಪಕರಣ ಬೇಕಾಗುತ್ತದೆ. ನೀರನ್ನು ಬಾವಿ, ಕೆರೆ, ನಾಲೆ ನದಿ ಮುಂತಾದವುಗಳಿಂದ ಮೇಲೆತ್ತಬಹುದು. ಇದು ಯಾಂತ್ರೀಕೃತ ಕಾರ್ಯ. ಇದನ್ನು ಬಗೆಬಗೆಯ ಉಪಕರಣಗಳಿಂದ ಸಾಧಿಸಲಾಗುವುದು. ಕೆಲವನ್ನು ಇಲ್ಲಿ ಪರಿಶೀಲಿಸಿದೆ. ಉಪಕರಣಗಳ ನೆರವಿನಿಂದ ನೀರೆತ್ತಿ ಕೃಷಿಗೆ ಒದಗಿಸುವ ಕ್ರಮ ಶಿಲಾಯುಗದ ಭಾರತೀಯನಿಗೆ ತಿಳಿದಿರಲಿಲ್ಲವೆಂದು ತೋರುತ್ತದೆ. ಕಾಲಾನಂತರ ಈತ ಈ ಕಲೆಯನ್ನು ಈಜಿಪ್ಟ್ ಮತ್ತು ಚೀನಿಯರಿಂದ ಕಲಿತಿರಬಹುದು. ಕ್ರಿಸ್ತಪೂರ್ವ 2084ರಷ್ಟು ಹಿಂದೆಯೇ ನೀರನ್ನು ಎತ್ತಿ ಕೃಷಿಗೆ ಒದಗಿಸುವುದು ಈಜಿಪ್ಟಿನವರಲ್ಲಿ ಇತ್ತು ಎಂದು ತಿಳಿಸುವ ಸಾಕ್ಷಿಗಳಿವೆ. ಷಡೂಪ್ ಎಂಬ ನಮ್ಮ ಏತವನ್ನು ಹೋಲುವ ಉಪಕರಣವನ್ನು ಬಳಸಿ ರೈತನೊಬ್ಬ ನೈಲ್ ನದಿಯಿಂದ ನೀರೆತ್ತುವ ಚಿತ್ರ ಈಜಿಪ್ಟಿನ ಅತಿ ಪುರಾತನ ಸ್ಮಾರಕವೊಂದರ ಮೇಲಿದೆ. ಇದು 5,000 ವರ್ಷಗಳಷ್ಟು ಪುರಾತನವಾದದ್ದು. ಮರಳು ಭೂಮಿಗಳಲ್ಲಿ ಇಟ್ಟಿಗೆ ಕಟ್ಟಡದ ಬಾವಿಗಳನ್ನು ನಿರ್ಮಿಸುವುದರಲ್ಲಿ ನಮ್ಮ ಪುರಾತನರು ನಿಪುಣರಾಗಿದ್ದರು. ನದೀಪಾತ್ರದ ಮರಳ ಹಾಸುಗಳಲ್ಲಿ ಬಾವಿ ಅಗೆದು ನೀರು ದೊರಕಿಸುವ ಕಲೆ ಬೆಳೆಯಿತು. ಕ್ರಿಸ್ತಯುಗಕ್ಕೆ ಅನೇಕ ಶತಮಾನಗಳ ಪೂರ್ವದಲ್ಲಿ ನೀರಾವರಿಯ ಪದ್ಧತಿ ರೂಢಿಯಲ್ಲಿದ್ದ ದಾಖಲೆಗಳಿವೆ.

 1906ರಲ್ಲಿ ಭಾರತದಲ್ಲಿ ನೀರಾವರಿ ಸೌಕರ್ಯ ಒಟ್ಟು ಸುಮಾರು 1,14,70,000 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಕರ್ಯ ಇತ್ತು. 41,00,000 ಹೆಕ್ಟೇರುಗಳಿಗೆ ನೀರು ಪೂರ್ಣವಾಗಿ ಬಾವಿಗಳಿಂದಲೇ ಒದಗುತ್ತಿತ್ತು. ಕೆಲವು ಪ್ರಾಂತ್ಯಗಳಲ್ಲಿ 1ರಿಂದ 1.5 ಹೆಕ್ಟೇರಿಗೆ ಸರಾಸರಿ ಒಂದು ಬಾವಿ, ಇಡೀ ದೇಶದಲ್ಲಿ ಸರಾಸರಿ 1.6 ಹೆಕ್ಟೇರಿಗೆ ಒಂದು ಬಾವಿ ಇದ್ದವು. ಇಂಥ ನೀರಾವರಿ ಬಾವಿಯೊಂದನ್ನು ನಿರ್ಮಿಸಲು ಸುಮಾರು 200ರಿಂದ 250 ರೂಪಾಯಿಗಳಷ್ಟು ವೆಚ್ಚ ತಗಲುತ್ತಿತ್ತು ಎಂದು ಭಾರತದ ಅಂಕೆಅಂಶಗಳ ಭೂಪಟದಲ್ಲಿ ತಿಳಿಸಲಾಗಿದೆ. ನೀರಾವರಿ ಬಾವಿಯೊಂದು ಸಾಮಾನ್ಯವಾಗಿ ದಿನವೊಂದಕ್ಕೆ 31,800 ರಿಂದ 36,400 ಲೀಟರುಗಳವರೆಗೆ ನೀರನ್ನು ಕೊಡುತ್ತದೆ. ಇದನ್ನು ಎತ್ತಲು ಬೇಕಾಗುವ ಸಾಮಥ್ರ್ಯ ಮುಖ್ಯವಾಗಿ ಜಾನುವಾರುಗಳಿಂದ ಒದಗುತ್ತದೆ. ಇಷ್ಟೊಂದು ಅಗಾಧ ಸಾಮಥ್ರ್ಯವನ್ನು ಸುಲಭದಲ್ಲಿ ಒದಗಿಸುವ ಕಡೆ ಲಕ್ಷ್ಯ ಹರಿದು ನೀರು ಎತ್ತುವ ಉಪಕರಣಗಳಲ್ಲಿ ಸುಧಾರಣೆಗಳು ಆಗುತ್ತ ಬಂದಿವೆ.

 ಪುರಾತನ ಮತ್ತು ಆಧುನಿಕ ನೀರೆತ್ತುವ ಉಪಕರಣಗಳು : 

1. 3 ಮೀಟರುಗಳಿಗಿಂತ ಕಡಿಮೆ ಆಳದಿಂದ ನೀರು ಎತ್ತುವ ಉಪಕರಣಗಳ ಪೈಕಿ ಗೂಡೆ, ಮತ್ತು ಆರ್ಕಿಮಿಡಿಯನ್ ಸುರುಳಿ ಕೊಳವೆ ಸೇರಿವೆ.

2. 3 ಮೀ.ನಿಂದ 7.6 ಮೀ. ವರೆಗಿನ ಆಳದಿಂದ ನೀರೆತ್ತುವ ಉಪಕರಣಗಳ ಪೈಕಿ ಏತ, ಕೈಯಿಂದ ನಡೆಸುವ ಪರ್ಶಿಯನ್ ಚಕ್ರ ಮತ್ತು ಅಪಕೇಂದ್ರಕ ರೇಚಕ ಇವೆ.

3. ಹೆಚ್ಚಿನ ಆಳದಿಂದ ನೀರೆತ್ತುವ ಉಪಕರಣಗಳ ಪೈಕಿ ಒಂಟಿಕಪಿಲೆ ಮತ್ತು ಜೋಡಿ ಕಪಿಲೆ, ಜಾನುವಾರು ಸಾಮಥ್ರ್ಯದಿಂದ ನಡೆಸುವ, ಪರ್ಶಿಯನ್ ಚಕ್ರ, ಸೋಸುಬಿಂದು ಮತ್ತು ಆಳವಾದ ಬಾವಿಯ ರೇಚಕ ಯಂತ್ರ ಇದೆ.
ಈ ನೀರೆತ್ತುವ ಉಪಕರಣಗಳಲ್ಲಿ ಸಾಮಾನ್ಯವಾಗಿ ಆಳವಾದ ಬಾವಿಗಳಿಂದ ನೀರೆತ್ತಲು ಒಂಟಿಕಪಿಲೆ, ಸ್ವಲ್ಪ ಆಳದಿಂದ ನೀರೆತ್ತಲು ಏತ ಮತ್ತು ಮದ್ಯಮ ತರಗತಿಯ ಆಳದಿಂದ ನೀರೆತ್ತಲು ಅಪಕೇಂದ್ರಕ ರೇಚಕಗಳು ಅತ್ಯುಪಯುಕ್ತ.
ಗೂಡೆ: ಇದೊಂದು ಬುಟ್ಟಿ. ಇದರ ಎರಡು ಪಕ್ಕಗಳಲ್ಲೂ ಒಂದೊಂದು ಜೊತೆ ಹಗ್ಗಗಳನ್ನು ಕಟ್ಟಿರುತ್ತಾರೆ. ಒಬ್ಬರಿಗೊಬ್ಬರು ಎದುರಾಗಿ ಇಬ್ಬರು ನಿಂತು ಹಗ್ಗಗಳನ್ನು ಕೈಯಲ್ಲಿ ಹಿಡಿದ ಬುಟ್ಟಿಯನ್ನು ತೂಗಿ ನೀರಿನಲ್ಲಿ ಅದ್ದಿ ಮೇಲೆತ್ತಿ ಬುಟ್ಟಿಯಲ್ಲಿ ತುಂಬಿ ಬರುವ ನೀರನ್ನು ಮೇಲೆ ಸುರಿಯುತ್ತಾರೆ. ಇದು 1ರಿಂದ 1.25 ಮೀ. ವರೆಗಿನ ಆಳದಿಂದ ನೀರೆತ್ತಲು ಮಾತ್ರ ಉಪಯುಕ್ತ. ಒಂದು ಗೂಡೆಯ ಘನಗಾತ್ರ 9ರಿಂದ 13 ಲೀಟರ್. ಗಂಟೆಗೆ 600ರಿಂದ 900 ಗೂಡೆಗಳಷ್ಟು ನೀರನ್ನು ಎತ್ತಬಹುದು. ಇದರಲ್ಲಿ ಯಾಂತ್ರಿಕ ಸೌಕರ್ಯವಿಲ್ಲ. 

ಆರ್ಕಿಮೀಡಿಯನ್ ಸುರುಳಿ ಕೊಳವೆ : ಇದು ಕೈಯಿಂದ ನಡೆಸುವ ಯಂತ್ರ. ಈಜಿಪ್ಟಿನ ಕೆಲವು ಭಾಗಗಳಲ್ಲಿ ಇದನ್ನು ನಡೆಸಲು ತೈಲ ಸಾಮಥ್ರ್ಯದ ಇಲ್ಲವೆ ವಿದ್ಯುತ್ತಿನ ಯಂತ್ರಗಳನ್ನು ಉಪಯೋಗಿಸುತ್ತಾರೆ. ಇದರಲ್ಲಿ ಸುಮಾರು 4.25 ಮೀಟರುಗಳಿಂದ 4.6 ಮೀ ಉದ್ದದ ಅಚ್ಚಿನ ಸುತ್ತ ಮರದ ತೆಳ್ಳನೆಯ ಹಲಗೆಯ ತುಂಡುಗಳನ್ನು ಜೋಡಿಸಿ ನೀರು ಸೋರದ ಒಂದು ಸುರುಳಿಯನ್ನು ಏರ್ಪಡಿಸಲಾಗಿದೆ. ನೀರು ಸೋರದಂತೆ ಮರದ ಕೊಳವೆಯಲ್ಲಿ ಈ ಸುರುಳಿಯನ್ನು ಅಳವಡಿಸಿದೆ. 
ಸಾಮಾನ್ಯವಾಗಿ ಕೊಳವೆಯ ವ್ಯಾಸ 36 ಸೆಂಮೀ. ಉದ್ದ 2.4 ಅಥವಾ 2.75ಮೀಟರುಗಳಿಗಿಂತ ಹೆಚ್ಚು ಇರುವುದಿಲ್ಲ. ಕೊಳವೆಯ ಎರಡೂ ಕಡೆ ಕಬ್ಬಿಣದ ಅಚ್ಚು ಹೊರಬಂದಿರುತ್ತದೆ. ಈ ಎರಡು ತುದಿಗಳನ್ನು ಆಧಾರ ಸ್ತಂಭಗಳ ಮೇಲೆ ನಿಲ್ಲಿಸಿರುತ್ತಾರೆ. ಸುರುಳಿಯ ಕೆಳತುದಿ ನೀರಿನಲ್ಲಿದ್ದು, ಕೊಳವೆ 30(ಯಲ್ಲಿ ವಾಲಿರುತ್ತದೆ. ಒಬ್ಬರು ಅಥವಾ ಇಬ್ಬರು ಇದನ್ನು ಕೈಯಿಂದ ನಡೆಸುತ್ತಾರೆ. ಆದರೆ ಸುರುಳಿಕೊಳವೆ ಹೆಚ್ಚು ಉದ್ದವಿದ್ದಾಗ ಮತ್ತು ಗೊತ್ತಿರುವ ಆಳದಿಂದ ನೀರೆತ್ತುವಾಗ ನಿಮ್ಮ ಸಾಮಥ್ರ್ಯದ ಯಂತ್ರವನ್ನು ಉಪಯೋಗಿಸುವವರು. ಹೆಚ್ಚಿನ ಆಳದಿಂದ ನೀರೆತ್ತಲು ಇದು ಉಪಯುಕ್ತವಲ್ಲ. ಇದು ಸ್ಥಳೀಯ ನೀರೆತ್ತುವ ಉಪಕರಣಗಳಿಗಿಂತ ಉತ್ತಮ. ಒಂದು ಗಂಟೆಗೆ ಸುಮರು 15,000 ಲೀಟರ್ ನೀರನ್ನು ಎತ್ತಬಹುದು.
ಏತ : ಇದೊಂದು ಉದ್ದವಾದ ದಂಡ. ಕವೆ ಇರುವ ಆಧಾರಸ್ತಂಭದ ಮೇಲೆ ಉದ್ದದ 2/3 ಭಾಗ ನೀರಿನ ಕಡೆ ಇರುವಂತೆ ಅಳವಡಿಸಿದೆ. ಈ ಭಾಗದ ಕೊನೆಯಲ್ಲಿ ಉದ್ದವಾದ ಗಳುವನ್ನು ಅಳವಡಿಸಿ ಅದರ ತುದಿಯಲ್ಲಿ ನೀರೆತ್ತುವ ಲೋಹದ ತೊಟ್ಟಿಯನ್ನು ಕಟ್ಟಿದೆ (ಚಿತ್ರ 3). ದಂಡದ ಮತ್ತೊಂದು ತುದಿಯಲ್ಲಿ ಇರುವ ನೀರನ್ನು ತೊಟ್ಟಿ ನೀರಿನಿಂದ ತುಂಬಿದಾಗ ಇರುವ ಭಾರಕ್ಕಿಂತ ಸ್ವಲ್ಪ ಹೆಚ್ಚಾಗಿ ಇರುತ್ತದೆ. ಈ ತೊಟ್ಟಿಯಲ್ಲಿ 35ರಿಂದ 45 ಲೀಟರ್ ನೀರು ಹಿಡಿಯುತ್ತದೆ. ಏತದಿಂದ ಗಂಟೆಗೆ ಸುಮಾರು 70ರಿಂದ 90 ಲೀಟರ್ ನೀರನ್ನು ಎತ್ತಿ ಹಾಯಿಸಬಹುದು. ಸುಮಾರು 4.5 ಮೀ. ಆಳದಲ್ಲಿರುವ ನೀರನ್ನು ಎತ್ತಲು ಇದು ಬಹಳ ಉಪಯುಕ್ತ. ಇದರಿಂದ ನೀರೆತ್ತುವಾಗ ತೊಟ್ಟಿಯಲ್ಲಿ ತುಂಬಿದ ನೀರನ್ನು ಕಾಲುವೆಗೆ ಸುರಿಯುವುದಕ್ಕೆ ಸ್ವಲ್ಪ ಅಭ್ಯಾಸಬೇಕು. ಈ ಉಪಕರಣ ಸನ್ನೆಕೋಲಿನ ಸೂತ್ರದ ಮೇಲೆ ರಚಿತವಾಗಿ ಯಾಂತ್ರಿಕ ಅನುಕೂಲತೆಗಳಿಂದ ಕೂಡಿದೆ. ಆದರೆ ಕಾಲುವೆಯಲ್ಲಿ ಹರಿಯುವ ನೀರಿನ ವೇಗ ಕಡಿಮೆ.

	ಕೈಯಿಂದ ನಡೆಸುವ ಪರ್ಶಿಯನ್ ಚಕ್ರ : ಮರದ ಅಥವಾ ಬಿದಿರಿನ ಪಿಪಾಯಿಯನ್ನು ಕೇಂದ್ರದಲ್ಲಿರುವ ಅಚ್ಚೊಂದರ ಮೇಲೆ ಅಳವಡಿಸಿದೆ. ಅಂತ್ಯರಹಿತ ಹಗ್ಗಕ್ಕೆ ಮಣ್ಣಿನ ಪಾತ್ರೆಗಳನ್ನು ಅಳವಡಿಸಿ ಪಿಪಾಯಿಯ ಸುತ್ತಲೂ ಹಾಕಿರುತ್ತಾರೆ. ಇದು ಮಧ್ಯಭಾರತದಲ್ಲಿ ಸಾಮಾನ್ಯವಾಗಿ ಉಪಯೋಗದಲ್ಲಿದೆ. ಇದನ್ನು ಒಬ್ಬ ಕುಳಿತುಕೊಂಡು ಕೈಯಿಂದ ಮತ್ತು ಕಾಲಿನಿಂದ ತಿರುಗಿಸುತ್ತಾನೆ. ಇದರಿಂದ ಗಂಟೆಗೆ 1,800 ರಿಂದ 2,700 ಲೀಟರ್ ನೀರನ್ನು ಎತ್ತಬಹುದು. ಹಗ್ಗದ ಉದ್ದವನ್ನು ನೀರಿನಲ್ಲಿ ಮುಳುಗುವಂತೆ ಏರ್ಪಡಿಸಬಹುದು. 4.6 ಮೀ. ಆಳದಿಂದ ನೀರೆತ್ತಲು ಈ ಉಪಕರಣ ಉಪಯುಕ್ತ. ಇದರ ರಚನೆ ಅತಿ ಸುಲಭ, ಆದರೆ ಇದು ಹೆಚ್ಚಿಗೆ ರೂಢಿಯಲ್ಲಿಲ್ಲ.

	ಜಾನುವಾರು ಸಾಮಥ್ರ್ಯದಿಂದ ನಡೆಸುವ ಪರ್ಶಿಯನ್ ಚಕ್ರ : ಇದರಲ್ಲಿ ಅಷ್ಟಕೋನಾಕೃತಿಯ ಇಲ್ಲವೆ ಗೋಲಾಕೃತಿಯ ಕಬ್ಬಿಣದ ಚಕ್ರದ ಸುತ್ತ ಅಂತ್ಯರಹಿತ ಸರಪಳಿ ಉಂಟು. ಸರಪಳಿಗೆ ಸತುವಿನ ಮುಲಾಮು ಸವರಿದ ಕಬ್ಬಿಣದ ಪಾತ್ರೆಗಳನ್ನು ಅಳವಡಿಸಿದೆ. ಇದು ಸುಧಾರಿತ ಗಿಯರ್ ನಮೂನೆಯ ನೀರೆತ್ತುವ ಉಪಕರಣ. ನೀರಿನ ಪಾತ್ರೆಯ ಸರಗಳನ್ನು ಹೊತ್ತು ಈ ಚಕ್ರ ಕೇಂದ್ರ ಅಚ್ಚಿನ ಮೇಲೆ ತಿರುಗುತ್ತದೆ (ಚಿತ್ರ 4). ಅಚ್ಚನ್ನು ಬಿವಿಲ್ ಹಲ್ಲುಚಕ್ರಕ್ಕೆ ಅಳವಡಿಸಿದೆ. ಒಂದು ಜೊತೆ ಎತ್ತುಗಳು ಈ ಚಕ್ರವನ್ನು ತಿರುಗಿಸುತ್ತವೆ. ಅವು ಮಿನಿಟಿಗೆ ಎರಡು ಸಾರಿಯಂತೆ 7 ಮೀ ವ್ಯಾಸವನ್ನು ಸುತ್ತುತ್ತವೆ. ಈ ಯಂತ್ರದ ಚಕ್ರದ 1.9 ಮೀ. ವ್ಯಾಸ ಮತ್ತು ಅಗಲ 1 ಮೀ. ಪ್ರತಿಯೊಂದು ನೀರಿನ ಪಾತ್ರೆಯಲ್ಲಿಯೂ 4.5ರಿಂದ 35 ಲೀಟರ್ ನೀರು ಹಿಡಿಸಬಲ್ಲದು. ಈ ಯಂತ್ರದಿಂದ ಗಂಟೆಗೆ ಸುಮಾರು 13,600ರಿಂದ 36,400 ಲೀಟರ್ ನೀರನ್ನು ಎತ್ತಬಹುದು. ಚಕ್ರ ಮತ್ತು ಅಂತ್ಯರಹಿತ ಸರಪಳಿಯನ್ನು ಮೆತುಕಬ್ಬಿಣ ಇಲ್ಲವೆ ಬೀಡುಕಬ್ಬಿಣದಿಂದ ತಯಾರಿಸುವರು.

	ಒಂಟಿಪಾತ್ರೆ ಮತ್ತು ಜೋಡಿಪಾತ್ರೆ ಕಪಿಲೆ : ಇದೊಂದು ಚರ್ಮದ ಚೀಲ. ಇದರ ತಳದಲ್ಲಿ ನೀರನ್ನು ಹೊರಚೆಲ್ಲುವ ಚರ್ಮದ ಕೊಳವೆ ಉಂಟು. ಚೀಲವನ್ನು ಹಗ್ಗಕ್ಕೆ ಕಟ್ಟಿ ಹಗ್ಗವನ್ನು ಚಕ್ರರಾಟೆ ಮೂಲಕ ಅದರ ಹಗ್ಗದ ಮತ್ತೊಂದು ತುದಿಗೆ ನೊಗವನ್ನು ಕಟ್ಟಿದೆ. ನೀರು ಚೆಲ್ಲುವ ಕೊಳವೆಯ ತುದಿಗೆ ಇನ್ನೊಂದು ಹಗ್ಗವನ್ನು ಕಟ್ಟಿ ಬಾವಿ ಕಟ್ಟೆಯ ಅಟ್ಟಲಿನಲ್ಲಿರುವ ಉರುಳು ಕೊರಡಿನ ಮೇಲೆ ಹಾಯಿಸಿ ನೊಗಕ್ಕೆ ಕಟ್ಟಿರುತ್ತದೆ. ಇಳಿಜಾರು ಜಾಡಿನಲ್ಲಿ ಎತ್ತುಗಳು ಮೇಲೆ ಮತ್ತು ಕೆಳಕ್ಕೆ ಚಲಿಸುವಾಗ ನೀರಿನ ಪಾತ್ರೆ ಸಹ ಚಲಿಸುತ್ತದೆ. ಇಳಿಜಾರು ಜಾಡಿನ ಪ್ರಮಾಣ 1 : 5. ನೀರಿನ ಪಾತ್ರೆಯಲ್ಲಿ 90ರಿಂದ 135 ಲೀಟರ್ ನೀರು ಹಿಡಿಯುವುದು. ಆದರೆ ನಿಜವಾಗಿ 65ರಿಂದ 115 ಲೀಟರ್ ನೀರನ್ನು ಮಾತ್ರ ಹೊರಗೆಡಹಬಹುದು ಅಷ್ಟೆ. ಒಂದು ಗಂಟೆಗೆ 60-80 ಚೀಲ ನೀರನ್ನು ಎತ್ತಬಹುದು. ಸುಮಾರು 25 ಮೀ. ಆಳದಿಂದ ನೀರೆತ್ತಲು ಈ ಉಪಕರಣ ಉಪಯುಕ್ತ. ಜೋಡಿ ಪಾತ್ರೆ ಕಪಿಲೆಗೆ ಇರಬೇಕಾದಷ್ಟು ದೊಡ್ಡ ಸುತ್ತಳತೆಯ ಬಾವಿ ಒಂಟಿ ಪಾತ್ರೆಯ ಕಪಿಲೆಗೆ ಬೇಕಿಲ್ಲ. ಸ್ಥಿತಿವಂತ ರೈತರಿಗೆ ಇದು ಉಪಯುಕ್ತ ನೀರೆತ್ತುಗ. ಯಾಂತ್ರಿಕ ಅನುಕೂಲತೆ ಹೊಂದಿರುವ, ಆದರೆ ಜಟಿಲವಲ್ಲದ, ಮತ್ತು ಹೆಚ್ಚು ಬಳಕೆಯಲ್ಲಿರುವ ಉಪಕರಣವಿದು. ಕಪಿಲೆಯನ್ನು ಎಳೆಯುವ ಎತ್ತುಗಳು ಇಳಿಜಾರು ಜಾಡಿನಲ್ಲಿ ಹತ್ತಿ ಇಳಿಯಬೇಕಾಗಿರುವುದರಿಂದ ಸಾಕಷ್ಟು ಬಲಶಾಲಿ ಆಗಿರುವುದರ ಜೊತೆಗೆ ಅವುಗಳಿಗೆ ಕಪಿಲೆ ಎಳೆಯುವ ಅಭ್ಯಾಸವೂ ಅಗತ್ಯ. ಒಂಟಿ ಪಾತ್ರೆ ಕಪಿಲೆಯಿಂದ ಗಂಟೆಗೆ 4,500ರಿಂದ 77,000 ಲೀಟರ್ ನೀರನ್ನು ಎತ್ತಬಹುದು. ನೀರಿನ ಚೀಲ, ಹಗ್ಗಗಳು ಮತ್ತು ಕಟ್ಟೆಯ ಮೇಲಿರುವ ಉರುಳು ಕೊರಡನ್ನು ವರ್ಷ ವರ್ಷ ಬದಲಾಯಿಸಬೇಕಾಗುವುದು.

	ಜೋಡಿ ಚೀಲಗಳಿರುವ ಕಪಿಲೆಗಳಲ್ಲಿ ಒಂದು ಚೀಲ ನೀರನ್ನು ಎತ್ತಿ ಚೆಲ್ಲುವಾಗ ಇನ್ನೊಂದು ಚೀಲ ನೀರಿನಲ್ಲಿ ಮುಳುಗಿ ತುಂಬಿರುತ್ತದೆ. ಇಳಿಜಾರು ಜಾಡು ಇನ್ನೂ ಕಡಿದಾಗಿರುವುದು; ಅಂದರೆ 1 : 3 ಪ್ರಮಾಣದಲ್ಲಿ. ಈ ಉಪಕರಣದಲ್ಲಿ ದೊಡ್ಡ ಚೀಲಗಳನ್ನು ಉಪಯೋಗಿಸಿ, ಹೆಚ್ಚು ನೀರನ್ನು ಎತ್ತಬಹುದು-ಗಂಟೆಗೆ 9,000ರಿಂದ 20,500 ಲೀಟರ್.

	ವಾಯು ಚಕ್ರ : ಬೀಸುಗಾಳಿಯ ಶಕ್ತಿಯನ್ನು ಉಪಯೋಗಿಸಿಕೊಂಡು ಬಾವಿ, ಕೊಳವೆಬಾವಿ ಇಲ್ಲವೆ ಕೆರೆಗಳಿಂದ ನೀರೆತ್ತುವ ಒಂದು ಸಾಧನ. ಇದನ್ನು, ಸ್ಥಾಪಿಸಲು ಮಾತ್ರ ಬಂಡವಾಳ ಹೂಡಬೇಕಾಗುತ್ತದೆ. ಮುಂದೆ ನಡೆಸಲು ಅಷ್ಟುವೆಚ್ಚ ತಗಲುವುದಿಲ್ಲ. ಈ ಉಪಕರಣದಲ್ಲಿ 30ರಿಂದ 40 ರೆಕ್ಕೆಗಳಿರುವ 6ರಿಂದ 7.6 ಮೀ. ವ್ಯಾಸ ಚಕ್ರ ಇದೆ. ಇದನ್ನು 12ರಿಂದ 15 ಮೀ. ಎತ್ತರದ ಗೋಪುರದ ತುದಿಯಲ್ಲಿ ಅಳವಡಿಸಿದೆ ಚಿತ್ರದಲ್ಲಿ. ಗೋಪುರವನ್ನು ಕಬ್ಬಿಣದ ಪಟ್ಟೆಗಳಿಂದ ತಯಾರಿಸಿದೆ. ಉದ್ದವಾದ ಒಂದು ದಂಡ 5ರಿಂದ 10 ಸೆಂಮೀ ವ್ಯಾಸದ 15 ರಿಂದ 20 ಸೆಂಮೀಗಳ ಆಡುವ ಪ್ಲಂಜರ್ ಮಾದರಿಯ ರೇಕತಕ್ಕೆ ಮತ್ತು ಚಕ್ರಕ್ಕೆ ಸಂಪರ್ಕ ಹೊಂದಿರುತ್ತದೆ. ಗಂಟೆಗೆ 9.7 ಕಿಮೀಗಿಂತ ಹೆಚ್ಚು ವೇಗದಲ್ಲಿ ಗಾಳಿ ಬೀಸುವಾಗ ಈ ಯಂತ್ರ ಸಮರ್ಪಕವಾಗಿ ಕೆಲಸ ಮಾಡುತ್ತದೆ. ದಿನಕ್ಕೆ ಕನಿಷ್ಠ 12 ಗಂಟೆ ಕಾಲ ಗಂಟೆಗೆ ಸರಾಸರಿ 24 ಕಿಮೀ ವೇಗದಲ್ಲಿ ಗಾಳಿ ಬೀಸುವೆಡೆಗಳಲ್ಲಿ ಈ ಸಾಧನ ಉಪಯುಕ್ತ. ಇಂಥ ಕಡೆ 24 ಗಂಟೆಗಳಲ್ಲಿ 18,200 ಲೀಟರ್ ನೀರನ್ನು ಎತ್ತಿ ದೊಡ್ಡ ತೊಟ್ಟಿಗಳಲ್ಲಿ ಕೂಡಿಟ್ಟು ವ್ಯವಸಾಯಕ್ಕೆ ಉಪಯೋಗಿಸಬಹುದು. ಇನ್ನೂ ಕಡಿಮೆ ಖರ್ಚಿನ ಮತ್ತು ಚಿಕ್ಕಪುಟ್ಟ ವಾಯುಚಕ್ರಗಳನ್ನು ಕಟ್ಟಲು ಸಂಶೋಧನೆ ನಡೆಯುತ್ತಿದೆ.

	ಅಪಕೇಂದ್ರಕ ರೇಚಕ : ಬೀಡು ಕಬ್ಬಿಣದ ರೇಚಕ ಯಂತ್ರದ ಒಳಗೆ ಲೋಹಕೀಲಕಗಳೂ ವೇಗವಾಗಿ ತಿರುಗಿ ಕೇಂದ್ರ ಸುತ್ತಲೂ ಸುತ್ತುತ್ತಿರುವ ವಸ್ತುವಿಗೆ ನೇರವಾಗಿ ಹಾರಿಹೋಗಲು ಇರುವ ಸಾಮಥ್ರ್ಯದಿಂದ ನೀರನ್ನು ಈ ರೇಚಕ ಯಂತ್ರಕ್ಕೆ ಎಳೆಯಲಾಗುತ್ತದೆ. ಯಂತ್ರದ ತುದಿಯಲ್ಲಿರುವ ರಂಧ್ರದಿಂದ ಈ ನೀರು ಹೊರಚೆಲ್ಲುತ್ತದೆ. ಈ ಮಾದರಿಯ ಉಪಕರಣಕ್ಕೆ ಅಪಕೇಂದ್ರ ರೇಚಕ (ಸೆಂಟ್ರಿಫ್ಯೂಗಲ್ ಪಂಪ್) ಎಂದು ಹೆಸರು. ಲೋಹಕೀಲಕಗಳನ್ನು ವೇಗವಾಗಿ ತಿರುಗಿಸಲು ಸಾಮಥ್ರ್ಯ ಯಂತ್ರಗಳನ್ನು ಬಳಸುತ್ತಾರೆ. ನೀರನ್ನು ಒಳಸೆಳೆಯುವ ಯಂತ್ರಗಳು ಒಂದು ಅಥವಾ ಎರಡು ಇರುವುವು. ಈ ಉಪಕರಣದಿಂದ ಎತ್ತುವ ನೀರಿನ ಗಾತ್ರ ನೀರನ್ನು ಒಳಸೆಳೆವ ರಂಧ್ರ ಮತ್ತು ಹೊರಚೆಲ್ಲುವ ರಂಧ್ರಗಳ ಗಾತ್ರ, ರೇಚಕಯಂತ್ರದಿಂದ ಆವರಣದ ಗಾತ್ರ ಮತ್ತು ಲೋಹಕೀಲಕಗಳ ವ್ಯಾಸ ಮತ್ತು ಅಗಲ ಇವನ್ನು ಅವಲಂಬಿಸಿವೆ. ತೈಲ ಅಥವಾ ವಿದ್ಯುಚ್ಛಕ್ತಿ ಯಂತ್ರಗಳಿಂದ ಇವನ್ನು ನಡೆಸುತ್ತಾರೆ. ತೈಲಶಕ್ತಿಯ ಯಂತ್ರಗಳಿಂದಾಗಿ ಅಪಕೇಂದ್ರಕ ರೇಚಕ ಈಗ ಎಲ್ಲೆಡೆಯಲ್ಲಿಯೂ ಬಳಕೆಗೆ ಬಂದಿದೆ. 7.6(6.4 ಚಸೆಂಮೀನ ಅಪಕೇಂದ್ರಕ ರೇಚಕ ಗಂಟೆಗೆ 38,200 ಲೀಟರ್ ನೀರನ್ನು 18 ಮೀ ಎತ್ತರಕ್ಕೆ ಎತ್ತುತ್ತದೆ. ಇದಕ್ಕೆ 5 ಅಶ್ವಸಾಮಥ್ರ್ಯದ ಯಂತ್ರ ಬೇಕು. ಮೇಲಕ್ಕೆ ಎತ್ತಬೇಕಾದ ನೀರಿನ ಗಾತ್ರ ಮತ್ತು ಎತ್ತರ ಬೇರೆಬೇರೆ ಆದಂತೆ ಬೇರೆ ಬೇರೆ ಅಶ್ವಸಾಮಥ್ರ್ಯದ ಯಂತ್ರಗಳು ಬೇಕಾಗುತ್ತವೆ.

	ಜರಡಿ ಕೊಳವೆ : ಮರಳು ಅಥವಾ ಹರಳು ಭೂಮಿಗಳಲ್ಲಿ ಬಾವಿಗಳನ್ನು ತೋಡುವುದು ಸಾಧ್ಯವಿಲ್ಲದಾಗ, ಇಲ್ಲವೆ ಬಹಳ ಖರ್ಚಿನದಾದಾಗ ಅಂತರ್ಗತ ನೀರನ್ನು ಎತ್ತಿ ವ್ಯವಸಾಯಕ್ಕೆ ಉಪಯೋಗಿಸಲು ಜರಡಿ ಕೊಳವೆ ಅಥವಾ ಸೋಸುಬಿಂದು (ಫಿಲ್ಟರ್ ಪಾಯಿಂಟ್) ಒಳ್ಳೆಯ ಸಾಧನ. 

ಚಿತ್ರ-8

ಇದರಲ್ಲಿ ತಂತಿ ಜರಡಿ ಕೊಳವೆ ಮತ್ತು ನಾರಿನ ಜರಡಿ ಕೊಳವೆ ಎಂದು ಎರಡು ವಿಧಗಳುಂಟು. ತಂತಿ ಜರಡಿ ಕೊಳವೆ 0.9ರಿಂದ 1.2 ಮೀ ವ್ಯಾಸದ 1.8 ಮೀ ಉದ್ದದ ಸಾಧಾರಣ ಕೊಳವೆ. ಇದರಲ್ಲಿ 1.3 ಸೆಂಮೀ ವ್ಯಾಸದ ರಂಧ್ರಗಳಿವೆ. ರಂಧ್ರಗಳಿರುವ ಕೊಳವೆಯ ಭಾಗದ ಸುತ್ತಲೂ ತಾಮ್ರದಿಂದ ಇಲ್ಲವೆ ಹಿತ್ತಾಳೆಯಿಂದ ಮಾಡಿದ ಬಲೆಯುಂಟು. ಈ ತಂತಿ ಬಲೆಗೆ ಸೂಕ್ಷ್ಮ ರಂಧ್ರಯುತ ಹಿತ್ತಾಳೆಯ ತಗಡಿನಿಂದ ರಕ್ಷಣೆ ಒದಗಿಸಿದೆ. ಜರಡಿ ಕೊಳವೆಯ ಕೆಳಭಾಗಕ್ಕೆ ಅಷ್ಟಕೋನಾಕೃತಿಯ, ಕೊನೆ ಚೂಪಾದ, ಕಬ್ಬಿಣದ ಸಲಾಕಿಯನ್ನೂ ಮೇಲ್ಭಾಗಕ್ಕೆ ಜರಡಿ ಕೊಳವೆಯಷ್ಟೆ ವ್ಯಾಸವುಳ್ಳ ಸುಮಾರು 6.1 ಮೀ ಉದ್ದದ ಕೊಳವೆಯನ್ನೂ ಅಳವಡಿಸಿರುತ್ತಾರೆ. ಇದರ ಉದ್ದ ಅಂತರ್ಗತ ನೀರಿರುವ ಆಳವನ್ನು ಅನುಸರಿಸಿ ಉಂಟು. ತಂತಿಬಲೆಯ ಜರಡಿ ಕೊಳವೆಗಳು ದೊಡ್ಡ ಕಣಗಳ ಮರಳು ಭೂಮಿಗಳಲ್ಲಿ ಉಪಯುಕ್ತ. ಇವು ತಂಜಾವೂರು ಜಿಲ್ಲೆಯಲ್ಲಿ ವಿಶೇಷ ಬಳಕೆಯಲ್ಲಿವೆ. 10 ಸೆಂಮೀ ವ್ಯಾಸದ ಈ ತಂತಿ ಬಲೆ ಜರಡಿ ಕೊಳವೆಯಿಂದ ಒಂದು ಗಂಟೆಗೆ 36,000 ಲೀಟರ್ ಎತ್ತಬಹುದು.

	ಉತ್ತಮ ತರದ ಮರಳಿನ ಭೂಮಿಗಳಲ್ಲಿ ಮೇಲೆ ವಿವರಿಸಿದ ತಂತಿ ಬಲೆ ಜರಡಿ ಕೊಳವೆ ಉಪಯುಕ್ತವಲ್ಲ. ಆದ್ದರಿಂದ ತಾಮ್ರ ಬಲೆ ಮತ್ತು ಹಿತ್ತಾಳೆಯ ರಕ್ಷಾಕವಚದ ಬದಲು ತೆಂಗಿನ ನಾರಿನ ಹುರಿಯನ್ನು ಸೋಸು ಬಲೆಯಾಗಿ ಉಪಯೋಗಿಸುತ್ತಾರೆ. ಈ ಬಗೆಯ ಜರಡಿ ಲೋಹದ ನಾಲ್ಕು ಚಪ್ಪಟೆ ಹಳಿಗಳಿಂದ ಕೂಡಿದೆ. 

ಚಿತ್ರ-9

ಇವನ್ನು 30ರಿಂದ 46 ಸೆಂಮೀ ಅಂತರಗಳಲ್ಲಿ ಕೊಳವೆ ಪಟ್ಟಿ ಬಂಧಿಸಿದೆ. ಒಂದು ಕೊನೆಯನ್ನು ಸೂಕ್ಷ್ಮ ರಂಧ್ರಗಳಿಂದ ಕೂಡಿದ ತಟ್ಟೆಯಿಂದ ಮುಚ್ಚಿದೆ. ಮತ್ತೊಂದು ಕೊನೆಯನ್ನು ನಿಪ್ಪಲ್ಲಿಗೆ ಸೇರಿಸಿ ಬಾವಿಯ ಕೊಳವೆಗೆ ಅಳವಡಿಸಿದೆ. ಈ ಲೋಹ ಕಟ್ಟಡಕ್ಕೆ ತೆಂಗಿನ ನಾರಿನ ಹುರಿಯನ್ನು ಎರಡು ಸುತ್ತಿನಲ್ಲಿ ಸುತ್ತಿರುತ್ತಾರೆ. ಇದರಿಂದ ಗಂಟೆಗೆ 43,200 ಲೀಟರ್ ನೀರನ್ನು ಎತ್ತಬಹುದು. ಮೇಲೆ ವಿವರಿಸಿದ ಎರಡು ಜರಡಿ ಕೊಳವೆಗಳನ್ನು ಮರಳುಭೂಮಿಯಲ್ಲಿ ಆಳವಾಗಿ ನೆಟ್ಟು ವಿದ್ಯುತ್ ಯಂತ್ರ ಇಲ್ಲವೆ ತೈಲ ಯಂತ್ರಗಳಿಂದ ನೀರೆತ್ತುತ್ತಾರೆ.

	ಆಳ ಬಾವಿಯ ರೇಚಕಗಳು: ಆಧುನಿಕ ಮರ್ದನ ರೇಚಕಗಳು ಅಥವಾ ರೇಚಕ ಯಂತ್ರಗಳು ಹಿಂದೆ ಹಳ್ಳಿ ಮನೆಗಳಲ್ಲಿ ಮತ್ತು ಚಿಕ್ಕ ಪಟ್ಟಣಗಳಲ್ಲಿ ನೀರೆತ್ತಲು ಉಪಯೋಗಿಸುತ್ತಿದ್ದ ಕೈ ರೇಚಕಗಳ ಸುಧಾರಿತ ರೂಪಗಳು. ಈ ರೇಚಕಯಂತ್ರದಲ್ಲಿ ಮರ್ದನ ಸಲಾಕೆ ಮತ್ತು ಕವಾಟವನ್ನು ಅಳವಡಿಸಿದೆ. ಇವುಗಳ ರಕ್ಷಾಕವಚ ಹಿತ್ತಾಳೆಯದು. 

ಚಿತ್ರ-10

ಸಾಮಾನ್ಯವಾಗಿ ಇದು ನೀರಿನಲ್ಲಿ ಮುಳುಗಿರುವುದು. ಅಲ್ಲದೆ ರೇಚಕವನ್ನು ನಡೆಸುವ ಯಂತ್ರಕ್ಕೆ ಲೋಹದ ಕೊಳವೆಯ ಮೂಲಕ ಸಂಪರ್ಕ ಏರ್ಪಡಿಸಿದೆ. ರೇಚಕದ ಕೊಳವೆಗಿಂತ ಈ ಕೊಳವೆ ಸ್ವಲ್ಪ ದೊಡ್ಡದು. ಏಕೆಂದರೆ ಮರ್ದನ ಸಲಕೆ ಮತ್ತು ಕವಾಟಗಳನ್ನು ಪರೀಕ್ಷೆ ಮತ್ತು ದುರಸ್ತಿಗಾಗಿ ಹೊರಕ್ಕೆ ಸುಲಭವಾಗಿ ತೆಗೆಯಬಹುದು. ರೇಚಕ ಯಂತ್ರ ಕೆಲಸ ಮಾಡುವಾಗ ಮರ್ದನ ಸಲಾಕೆ ಮೇಲಕ್ಕೂ ಕೆಳಕ್ಕೂ ಆಡುತ್ತದೆ. ಹೀಗೆ ಅದು ಚಾಲುಗೊಂಡಾಗ ನೀರು ಕವಾಟದಿಂದ ಪ್ರವೇಶಿಸಿ ಮೇಲಕ್ಕೆ ಬರುವುದು. ಈ ರೇಚಕಗಳನ್ನು ಸುಮಾರು 245 ಮೀ ಆಳದ ನೀರನ್ನು ಎತ್ತಲು ಉಪಯೋಗಿಸಬಹುದು. ಇದನ್ನು ಸಣ್ಣ ಪ್ರಮಾಣದ ಗಾಳಿಚಕ್ರಗಳಿಂದ ಇಲ್ಲವೆ ವಿದ್ಯುತ್ ಯಂತ್ರಗಳಿಂದ ನಡೆಸಬಹುದು. ಗಂಟೆಗೆ ಸುಮಾರು 1,63,700 ಲೀಟರ್ ನೀರನ್ನು ಎತ್ತಬಹುದು.

	ವಾಯು ಸಂಮರ್ದದಿಂದ ಕೂಡ ಆಳ ಬಾವಿಗಳಿಂದ ನೀರನ್ನು ಎತ್ತಬಹುದು. ಸಂಮರ್ದಿತ ವಾಯುವನ್ನು ಸಣ್ಣ ಕೊಳವೆಯ ಮೂಲಕ ಬಾವಿಗೆ ಬಿಟ್ಟು ಇನ್ನೊಂದು ಕೊಳವೆಯ ಮೂಲಕ ನೀರನ್ನು ಮೇಲಕ್ಕೆ ಎತ್ತುತ್ತಾರೆ. ನೀರನ್ನು ಹೊರಚೆಲ್ಲುವ ಕೊಳವೆಯ ಕೆಳತುದಿ ನೀರಿನಲ್ಲಿ ಮುಳುಗಿರಬೇಕು. ಈ ತೆರನಾದ ಉಪಕರಣವನ್ನು ಮೊದಲುಬೈರಿಗೆ ಬಾವಿಗಳಿಂದ ನೀರೆತ್ತಲು ಉಪಯೋಗಿಸುತ್ತಿದ್ದರು. ಇದರಿಂದ ಗಂಟೆಗೆ 5,500 ರಿಂದ 5,50,000 ಲೀಟರ್ ನೀರನ್ನು ಎತ್ತಬಹುದು.
(ವಿ.ಎಂ.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ